ಬೆಲ್‍ಫಾಸ್ಟ್
ಉತ್ತರ ಐರ್ಲೆಂಡಿನ ಆಡಳಿತ ಕೇಂದ್ರ.  ಬಂದರು ಮತ್ತು ನಗರ.  ಬೆಲ್‍ಫಾಸ್ಟ್ ಕೊಲ್ಲಿಯನ್ನು ಲಾಗನ್ ನದಿ ಕೂಡುವಲ್ಲಿದೆ.  ಈ ನಗರ ಆಂಟ್ರಿಮ್ ಮತ್ತು ಡೌನ್ ಕಾಂಟಿಗಳೆರಡರಲ್ಲೂ ವಿಸ್ತರಿಸಿ ಬೆಳೆದುಕೊಂಡಿದೆ. ವಿಸ್ತೀರ್ಣ 65 ಚಕಿಮೀ.  ಜನಸಂಖ್ಯೆ 3,57,600 (1978). 

	ಬೆಲ್‍ಫಾಸ್ಟ್ 1888 ರಲ್ಲಿ ಪಟ್ಟಣವೆಂದು ಪರಿಗಣಿಸಲಾಯಿತು.  1898ರಲ್ಲಿ ಅದಕ್ಕೆ ಕೌಂಟಿ ನಗರದ ಸ್ಥಾನ ದೊರೆಯಿತು.  1920ರ ಐರ್ಲೆಂಡ್ ಸರ್ಕಾರದ ಕಾಯಿದೆ ಪ್ರಕಾರ ಉತ್ತರ ಐರ್ಲೆಂಡಿನ ಮುಖ್ಯ ಆಡಳಿತ ಕೇಂದ್ರವಾಯಿತು.  

	ಈ ಪ್ರದೇಶದಲ್ಲಿ ಶಿಲಾ ಮತ್ತು ಕಂಚು ಯುಗಗಳಲ್ಲಿ ಜನವಸತಿಯಿತ್ತೆನ್ನುವುದಕ್ಕೆ ಕುರುಹುಗಳಿವೆ.  ಆದರೂ ಬೆಲ್‍ಫಾಸ್ಟ್ ಪ್ರಾಚೀನ ಇತಿಹಾಸ ಸ್ಪಷ್ಟವಾಗಿಲ್ಲ.  ಆಲ್‍ಸ್ಟರಿನ ಜಾನ್ ಡ ಕೌರ್ಸಿ ಎಂಬಾತ ಲಾಗನ್ ನದಿಯ ದಡದಲ್ಲಿ ಕೋಟೆಯನ್ನು ಕಟ್ಟಿದಂದಿನಿಂದ ಬೆಲ್‍ಫಾಸ್ಟ್‍ನ ಇತ್ತೀಚಿನ ಇತಿಹಾಸವನ್ನು ಗುರುತಿಸುತ್ತಾರೆ.  1315ರಲ್ಲಿ ಕೋಟೆ ಮತ್ತು ಊರು ಇವೆರಡನ್ನೂ ಎಡ್ವರ್ಡ್ ಬ್ರೂಸ್ ಹಾಳುಗೆಡಹಿದನಾದರೂ ಜನವಸತಿ ಮುಂದುವರಿಯಿತು.  1571ರಲ್ಲಿ ಅದು 1ನೆಯ ಎಲಿಜಬೆತ್ ರಾಣಿಯ ಪ್ರೀತಿಪಾತ್ರ ಸರ್ ಥಾಮಸ್ ಸ್ಮಿತ್‍ನ ವಶವಾಯಿತು.  1603ರಲ್ಲಿ ಸರ್ ಆರ್ಥರ್ ಬೆಚೆಸ್ಟರ್ ಬೆಲ್‍ಫಾಸ್ಟ್‍ನ್ನು ವಶಪಡಿಸಿಕೊಂಡು 1611ರಲ್ಲಿ ಕೋಟೆ ಕಟ್ಟಿದ್ದಲ್ಲದೆ ಊರು ಬೆಳೆಯುವುದಕ್ಕೆ ಕಾರಣನೂ ಆದ.  1613ರಲ್ಲಿ 1ನೆಯ ಜೇಮ್ಸ್‍ನಿಂದ ನಗರಾಡಳಿತಾಧಿಕಾರದ ಮನ್ನಣೆ ಪಡೆಯಿತು. 1685ರ ಸುಮಾರಿಗೆ ಅಲ್ಲಿ ಇಟ್ಟಿಗೆ, ಹಗ್ಗದ ಬಲೆ ಮತ್ತು ಹಾಯಿ ಬಟ್ಟೆಗಳ ತಯಾರಿಕೆಯಲ್ಲಿ ತೊಡಗಿದ್ದ 2,000 ಮಂದಿ ವಾಸಿಸುತ್ತಿದ್ದರು.  1730ರ ದಶಕದ ಅಂತ್ಯದೊಳಗೆ ಬೆಲ್‍ಫಾಸ್ಟ್ ಆರ್ಥಿಕ ಮಹತ್ತ್ವ ಪಡೆದು ಆಲ್‍ಸ್ಟರಿನ ಲಿನಿನ್ ಬಟ್ಟೆಯ ಮುಖ್ಯ ಮಾರುಕಟ್ಟೆಯಾಯಿತು.  ಇದಕ್ಕೆ ಗ್ರೇಟ್ ಬ್ರಿಟನ್ನಿನ 3ನೆಯ ವಿಲಿಯಮ್‍ನ ಆಶ್ರಯ ಪಡೆದಿದ್ದ ಫ್ರೆಂಚ್ ಹ್ಯೂಗೆ ನಾಟ್ ನಿರಾಶ್ರಿತರು (ಫ್ರೆಂಚ್ ಪ್ರಾಟೆಸ್ಟಂಟರು) ಬಹುಮಟ್ಟಿಗೆ  ಕಾರಣವೆನ್ನಬಹುದು.  ಲಿನನ್ ನೂಲುವಿಕೆ ಮತ್ತು ನೇಯ್ಗೆ ಯಾಂತ್ರೀಕೃತವಾದ ಅನಂತರ ಬೆಲ್‍ಫಾಸ್ಟ್ ಪ್ರಪಂಚದ ಅತಿದೊಡ್ಡ ಲಿನನ್ ಬಟ್ಟೆ ತಯಾರಿಕಾ ಕೇಂದ್ರಗಳಲ್ಲೊಂದಾಯಿತು.  ವಿಲಿಯಮ್ ರಿಚಿ 1791 ಮತ್ತು 1796ರಲ್ಲಿ ಸ್ಥಾಪಿಸಿದ ಬಂದರು ಕಟ್ಟೆಯಿಂದಾಗಿ ನೌಕಾನಿರ್ಮಾಣ ಚಟುವಟಿಕೆ ಬೆಳೆಯಿತು.  ಈ ನಗರ ಒಂದನೆಯ ಮಹಾಯುದ್ಧದ ಕಾಲದಲ್ಲಿ (1914) ಬಾಂಬಿನ ದಾಳಿಯಿಂದ ಬಹಳಷ್ಟು ನಷ್ಟ ಅನುಭವಿಸಿತು.  

	ಬೆಲ್‍ಫಾಸ್ಟಿನಿಂದ ಇಂಗ್ಲೆಂಡಿನ ಹೆಷಾಮ್, ಲಿವರ್‍ಪೂಲ್ ಮತ್ತು ಮ್ಯಾಂಚೆಸ್ಟರ್ ಹಾಗೂ ಸ್ಕಾಟ್ಲೆಂಡಿನ ಗ್ಲಾಸ್ಗೊ ಮತ್ತು ಅಡ್ರಾಸಾನ್‍ಗಳಿಗೆ ನೌಕಾ ಸಂಪರ್ಕವಿದೆ.  ಆಲ್ಡರ್ ಗ್ರೋವ್‍ನಲ್ಲಿ ವಿಮಾನ ನಿಲ್ದಾಣವಿದೆ.  ಇಲ್ಲಿಂದ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡುಗಳ ಮುಖ್ಯ ನಗರಗಳಿಗೆ ವಿಮಾನ ಸಂಪರ್ಕವಿದೆ.  ಹಿಟ್ಟು ಮಾಡುವುದು, ಆಹಾರ ಸಂಸ್ಕರಣ ಮತ್ತು ಡಬ್ಬಗಳಲ್ಲಿ ತುಂಬುವುದು, ಬಟ್ಟೆ, ಸೆಣಬು, ಪಾದರಕ್ಷೆ, ತಂಬಾಕು, ಹಗ್ಗ, ಕೇಬಲ್, ಲೋಹದ ವಸ್ತುಗಳು, ಯಂತ್ರ, ವಿಮಾನ ಮತ್ತು ರಾಸಾಯನಿಕ ವಸ್ತುಗಳ ತಯಾರಿಕೆ ಇಲ್ಲಿ ನಡೆಯುತ್ತಿದೆ.  ನೌಕಾ ನಿರ್ಮಾಣ ಮತ್ತು ದುರಸ್ತಿ ಇಲ್ಲಿಯ ಮುಖ್ಯ ಕೈಗಾರಿಕೆ, ನೌಕೆ, ವಿಮಾನ, ವ್ಯವಸಾಯೋತ್ಪನ್ನಗಳು ಮತ್ತು ಜಾನುವಾರು ಹಾಗೂ ಲಿನನ್ ಬಟ್ಟೆ ಇವು ಮುಖ್ಯ ರಫ್ತುಗಳು.

	ಬೆಲ್‍ಫಾಸ್ಟ್‍ನಲ್ಲಿ ಅನೇಕ ಹಳೆಯ ಕಟ್ಟಡಗಳಿವೆ. ಅವುಗಳಲ್ಲಿ ನಗರ ಸಭಾಂಗಣ (1906) ಮತ್ತು ನ್ಯಾಯಾಲಯದ ಕಟ್ಟಡಗಳು (1933), ತಾಂತ್ರಿಕ ಕಾಲೇಜು (1901), ವಸ್ತು ಸಂಗ್ರಹಾಲಯ ಮತ್ತು ಚಿತ್ರಶಾಲೆ (1929), ಸಾರ್ವಜನಿಕ ಗ್ರಂಥಾಲಯ (1888), ಬಂದರು ಕಾರ್ಯಾಲಯ (1896), ಸಂತ ಆನಳ ಆರಾಧನಾ ಮಂದಿರ (1904), ಪಾರ್ಲಿಮೆಂಟ್ ಕಟ್ಟಡ (1932).  ಪ್ರಾಣಿ ಸಂಗ್ರಹಾಲಯದಿಂದ ಕೂಡಿದ ಬೆಲ್ಲೆವ್ಯೂ ಉದ್ಯಾನ ಮುಂತಾದವು ಪ್ರೇಕ್ಷಣೀಯವೆನಿಸಿವೆ.  ಅನೇಕ ಕಾಲೇಜುಗಳನ್ನೊಳಗೊಂಡ ವಿಶ್ವವಿದ್ಯಾಲಯ ಮತ್ತು ಗ್ರಂಥಾಲಯಗಳೂ ಇವೆ.  
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ